ಡಾರ್ಫರ್
ಇದು ಆಫ್ರಿಕ ಖಂಡದ ಸೂಡಾನ್ ಗಣರಾಜ್ಯದ ಪಶ್ಚಿಮಭಾಗದ ಒಂದು ಪ್ರಾಂತ್ಯ. ಉ.ಅ. 9ಲಿ-20ಲಿ ಮತ್ತು ಪೂ.ರೇ. 21ಲಿ 50'-27ಲಿ 50' ನಡುವೆ ಇದೆ. ವಿಸ್ತೀರ್ಣ 1,99,650 ಚ.ಮೈ. ಜನಸಂಖ್ಯೆ 16,83,000 (1969). ರಾಜಧಾನಿ ಎಲ್‍ಫಾಷೆರ್. ಡಾರ್ಫರ್ ಪ್ರಾಂತ್ಯ ಸಮುದ್ರಮಟ್ಟದಿಂದ 2000'-2000' ಎತ್ತರವಾದ ಪ್ರಸ್ಥಭೂಮಿ. ಪಶ್ಚಿಮ ಮತ್ತು ಉತ್ತರದಲ್ಲಿ ಅಸಮವಾದ ತಗ್ಗುಬೆಟ್ಟಗಳೂ ಮಧ್ಯದಲ್ಲಿ ಜಬಾಲ್‍ಮಾರ (10,134') ಜಬಾಲ್‍ಮೇದಾಬ್     ಮುಂತಾದ ಜ್ವಾಲಾಮುಖೀಯ ಪರ್ವತಗಳೂ ಇವೆ. 

	ಇಲ್ಲಿಯದು ಖಂಡೀಯ ಉಷ್ಣವಲಯ ವಾಯುಗುಣ. ಮೇ-ಅಕ್ಟೋಬರ್ ಮಳೆಗಾಲ. ದಕ್ಷಿಣದ ಎಲ್ಲೆಯ ಬಳಿ 35" ಮಳೆಯಾಗುತ್ತದೆ. ಉತ್ತರಕ್ಕೆ ಸಾಗಿದಂತೆ ಮಳೆ ಕಡಿಮೆಯಾಗಿ ಉ.ಅ. 20ಲಿಯಲ್ಲಿ ಮಳೆಯೇ ಇರುವುದಿಲ್ಲ. ಎತ್ತರಕ್ಕೆ ಅನುಗುಣವಾಗಿ ಉಷ್ಣತೆ ವ್ಯತ್ಯಾಸವಾಗುತ್ತದೆ. ಜಬಾಲ್‍ಮರದ ಆಗ್ನೇಯ ಭಾಗದಲ್ಲಿ ಹರಿಯುವ ಕೆಲವು ತೊರೆಗಳನ್ನು ಬಿಟ್ಟರೆ ಸದಾ ಹರಿಯುವ ನದಿಗಳು ಯಾವುವೂ ಇಲ್ಲ. ಆದರೆ ಮಳೆಗಾಲದಲ್ಲಿ ಮಧ್ಯದ ಅಗ್ನಿಪರ್ವತ ಪ್ರದೇಶದಿಂದ ಹಲವು ಹೊಳೆಗಳು ತುಂಬಿ ಹರಿಯುತ್ತವೆ. 

	ಉಷ್ಣವಲಯದ ಸವಾನ ಹುಲ್ಲುಗಾಡು ಸಾಮಾನ್ಯವಾಗಿ ಇಲ್ಲಿಯ ಸ್ವಾಭಾವಿಕ ಸಸ್ಯ. ದಕ್ಷಿಣದಲ್ಲಿ ಎತ್ತರವಾದ ಹುಲ್ಲಿನ ಜೊತೆಗೆ ಪರ್ಣಪಾತಿ ಮತ್ತು ಅರೆಪರ್ಣಪಾತಿ ವೃಕ್ಷಗಳೂ ಇವೆ. ಕೆಲವೆಡೆ ನಿತ್ಯಹಸುರು ಮರಗಳುಂಟು. ಮಧ್ಯವಲಯದಲ್ಲಿ ಹುಲ್ಲಿನ ಎತ್ತರ ಕಡಿಮೆಯಾಗುತ್ತದೆ. ಗೊಬ್ಬಳಿ ಜಾತಿಯ ಹಲವು ಮರಗಳು ಇಲ್ಲಿ ಉಂಟು. ಉ. ಅ. 17ಲಿ 30'ನಲ್ಲಿ ಮರುಭೂಮಿ ಇದೆ. ಜಬಾಲ್‍ಮಾರದಲ್ಲಿ ಪರ್ವತಸಸ್ಯಗಳನ್ನು ಕಾಣಬಹುದು. ಸಿಂಹ, ಚಿರತೆ, ತೋಳ, ಜಿರಾಫೆ, ನರಿ, ನೀರುಕುದುರೆ, ಖಡ್ಗಮೃಗ ಮತ್ತು ಕತ್ತೆಕಿರುಬ, ಜಿಂಕೆ, ಉಷ್ಟ್ರಪಕ್ಷಿ ಮುಂತಾದವು ಇವೆ. ಸೆಜ್ಜೆ, ರಾಗಿ, ಎಳ್ಳು, ನೆಲಗಡಲೆ, ಮುಸುಕಿನ ಜೋಳ, ತರಕಾರಿ, ಹಣ್ಣು, ಹತ್ತಿ ಮುಖ್ಯ ಬೆಳೆಗಳು ಜಬಾಲ್ ಮಾರದ ಮೇಲೆ ಗೋಧಿ ಬೆಳೆಯುತ್ತದೆ. ಬೇಸಾಯದ ಜೊತೆಗೆ ಪ್ರಾಣಿಗಳನ್ನು ಸಾಕುವುದೂ ಒಂದು ಮುಖ್ಯ ಕಸುಬು. ಒಂಟೆ, ಕುರಿ, ಆಡು, ದನ, ಕುದುರೆ ಮುಖ್ಯ ಪ್ರಾಣಿಗಳು.

	ಇಲ್ಲಿ ಫರ್, ಬಗ್ಗಾರ, ಬರ್ಟಿ, ಬರ್ಗಿಡ್, ಮಸಾಲಿಟ್, ಜûಗಾವ, ಮೇಡಾಬ್ ಗುಂಪುಗಳ ಜನರಿದ್ದಾರೆ. ಪ್ರಾಂತ್ಯದಲ್ಲಿ ಐದು ಆಡಳಿತ ಜಿಲ್ಲೆಗಳಿವೆ. ರಾಜಧಾನಿ ಎಲ್ ಫಾಷೆರ್‍ನ ಜನಸಂಖ್ಯೆ 46,380 (1969). ಪ್ರಾಂತ್ಯದ ಸಂಚಾರ ವ್ಯವಸ್ಥೆ ಅಭಿವೃದ್ಧಿ ಹೊಂದಿಲ್ಲ. ಉತ್ತಮ ರಸ್ತೆಗಳು ಹೆಚ್ಚಾಗಿ ಇಲ್ಲ. ನ್ಯಾಲಕ್ಕೆ ರೈಲುಮಾರ್ಗವಿದೆ. ಗೆನೀನ, ನ್ಯಾಲ, ಎಲ್ ಫಾಷೆರ್‍ಗಳಿಂದ ಓಬೀದ್ ಮತ್ತು ಖಾರ್ಟೂಮ್‍ಗೆ ವಿಮಾನ ಸಂಪರ್ಕವುಂಟು.

	ಪ್ರಾಗಿತಿಹಾಸಕಾಲದಲ್ಲಿ ಅತ್ಯಂತ ಉತ್ತರ ಪ್ರದೇಶದಲ್ಲಿ ನೈಲ್ ಕಣಿವೆಯ ರಾಜವಂಶಪೂರ್ವದ ಜನರು ವಾಸಿಸುತ್ತಿದ್ದರು. ಇಲ್ಲಿ ಆಳುತ್ತಿದ್ದ ಡಾಜುಗಳಿಗೂ ಈಜಿಪ್ಟಿನವರಿಗೂ ಸಂಬಂಧ ಇದ್ದಿರಬೇಕು. ಕ್ರಿ.ಪೂ.2000ದ ನೈಲ್ ಕಣಿವೆಯ ಮಡಕೆಗಳು ಮತ್ತು ಕೊಡಲಿಗಳನ್ನು ಹೋಲುವ ಮಡಕೆಗಳೂ ಕೊಡಲಿಗಳೂ ಈ ಪ್ರಾಂತ್ಯದ ಉತ್ತರ ಭಾಗದಲ್ಲಿ ದೊರಕಿವೆ. ಕ್ರಿ.ಶ.ಸು.350ರಲ್ಲಿ ಮೆರೋ ಪತನ ಹೊಂದಿದಾಗ ಪಶ್ಚಿಮಕ್ಕೆ ಓಡಿಹೋದ ಕಷ್ ರಾಜಮನೆತನದವರು ಡಾರ್ಫರ್‍ನಲ್ಲಿ ಆಳಿರಬೇಕು. ಅನಂತರ ಇದರ ಮೇಲೆ ಕ್ರೈಸ್ತಮತದ ಪ್ರಭಾವ ಬಿತ್ತು (900-1200). ಇಸ್ಲಾಂ ಪೂರ್ವಾಭಿಮುಖವಾಗಿ ಹಬ್ಬತೊಡಗಿದಾಗ ಇಲ್ಲಿ ಕ್ರೈಸ್ತಮತದ ಪ್ರಾಬಲ್ಯ ಹೋಯಿತು. ಇಲ್ಲಿ ಆಳುತ್ತಿದ್ದ ಸುಲ್ತಾನರು ಸ್ಥಳೀಯ ನೀಗ್ರಾಯಿಡ್ ಬುಡಕಟ್ಟಿನವರೊಂದಿಗೆ ಬೆರೆತರು. 1874ರಲ್ಲಿ ಇದರ ಮೇಲೆ ಈಜಿಪ್ಟಿನ ಆಳ್ವಿಕೆ ಆರಂಭವಾಯಿತು. ಈಜಿಪ್ಷಿಯನ್ ಸೂಡಾನಿನ ಮೇಲೆ ಒಡೆತನ ಸ್ಥಾಪಿಸಿದ ಮಹಮ್ಮದ್ ಅಹ್ಮದ್ (ಮಹ್ದಿ) ಇದನ್ನು 1883ರಲ್ಲಿ ವಶಪಡಿಸಿಕೊಂಡ. ಇವನ ಅನಂತರ ಬಂದ ಖಲೀಫ ಬ್ರಿಟಿಷರಿಂದ ಸೋತ (1898). ಹೊಸ ಆಂಗ್ಲೊ-ಈಜಿಪ್ಟಿಯನ್ ಸರ್ಕಾರ ಹಿಂದಿನ ಸುಲ್ತಾನ ಮನೆತನದವನೊಬ್ಬನನ್ನು (ಅಲಿ ದಿನಾರ್) ಇವನ ಸ್ಥಾನದಲ್ಲಿ ಕೂರಿಸಿತು (1699). 1915ರಲ್ಲಿ ಅವನು ಬ್ರಿಟಿಷರ ವಿರುದ್ಧ ದಂಗೆಯೇಳಲು ಯತ್ನಿಸಿದಾಗ ಬ್ರಿಟಿಷ್ ಸರ್ಕಾರ ಅವನನ್ನು ಕೊಂದು ಡಾರ್ಫರನ್ನು ಸೂಡಾನಿನ ಪ್ರಾಂತ್ಯವಾಗಿ ಮಾಡಿತು.
(ಆರ್.ಸಿಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ